ಬೆಳಗಾವಿಯಲ್ಲಿ ಇಂದಿನಿಂದ ವಿಧಾನ ಮಂಡಲ ಅಧಿವೇಶನ. ಇದನ್ನು ಯಾವ ಪುಣ್ಯಕ್ಕೆ ಅಥವಾ ಪುರುಷಾರ್ಥಕ್ಕೆ ಸರ್ಕಾರ ಯೋಜಿಸುತ್ತದೆ ಎಂಬುದೇ ಜನರಿಗೆ ಯಕ್ಷಪ್ರಶ್ನೆ ಆಗಿದೆ. ವಿಧಾನ ಮಂಡಲಗಳಲ್ಲಿ ಸದಸ್ಯರು ಕೈ ಕೈ ಮಿಲಾಯಿಸುವ, ಅಪದ್ಧ ಭಾಷೆ ನುಡಿಯುವ ಮಟ್ಟಕ್ಕೆ ಹೋಗುತ್ತಾರೆ. ಒಟ್ಟಿನಲ್ಲಿ ಅಧಿವೇಶನದಲ್ಲಿ ಏನು ಆಗಬೇಕೋ ಅದು ಆಗುವುದಿಲ್ಲ. ಇನ್ನು ಬೆಳಗಾವಿಯಲ್ಲಂತೂ ಅಧಿವೇಶನ ನಡೆದರೆ, ಇಲ್ಲಿ ಏನೋ ಸಾಧನೆ ಆಗಿ ಬಿಡುತ್ತದೆ ಎಂಬ ಜನರ ಭ್ರಮೆಯೆಲ್ಲ ಹೊರಟು ಹೋಗಿದೆ.
ಹಾಗೆ ನೋಡಿದರೆ ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ಕಟ್ಟಿಸಿದ್ದು ಈ ನಗರವನ್ನು ಎರಡನೇ ರಾಜಧಾನಿ ಆಗಿ ಮಾಡಲು ಹಾಗೂ ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಲು. ಆದರೆ ಸುವರ್ಣಸೌಧಕ್ಕೆ ಇದುವರೆಗೆ ಯಾವ ಇಲಾಖೆಯೂ ವರ್ಗ ಆಗಿಲ್ಲ ಮತ್ತು ಸದ್ಯಕ್ಕೆ ಆಗುವುದೂ ಇಲ್ಲ. ಇಲ್ಲಿನ ಭಣಗುಟ್ಟುವ ಸೌಧದ ತುಂಬಾ ಪಾರಿವಾಳಗಳದ್ದೇ ದರ್ಬಾರು. ಅವುಗಳ ಹಿಕ್ಕೆ ತೆಗೆದು ಹಾಕಲೆಂದೇ ಸಿಬ್ಬಂದಿ ಇಡಬೇಕಾದ ಪರಿಸ್ಥಿತಿ. ಇದಕ್ಕಾಗಿ ಇಲ್ಲಿ ನೂರಾರು ಕೋಟಿ ಖರ್ಚು ಮಾಡಿ ಸೌಧ ನಿರ್ಮಿಸಬೇಕಿತ್ತೇ? ಹೇಗೂ ಇದು ಖಾಲಿ ಇದೆಯಲ್ಲ ಎಂದು ಸೌಧದ ಹಂಗಾಮಿ ನೌಕರಿಯ ಮಹಿಳೆಯೊಬ್ಬಳು ಸೌಧದ ಅಂಗಳದಲ್ಲಿ ಸಂಡಿಗೆ ಒಣಗಲು ಹಾಕಿದ್ದು ದೊಡ್ಡ ಸುದ್ದಿ ಆಯಿತು. ಇದೇ ಸೌಧದ ಎದುರು ನಡೆದ ರೈತ ಸತ್ಯಾಗ್ರಹದ ಸಮಯಕ್ಕೆ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡ. ಆತನ ಕುಟುಂಬಕ್ಕೆ ಇನ್ನಿಲ್ಲದ ನೆರವು ಅಂದು ಘೋಷಿಸಿದ ಪುಣ್ಯಾತ್ಮರು ಮತ್ತೆ ಎಂದೂ ಆ ರೈತನ ಕುಟುಂಬದತ್ತ ಕಣ್ಣು ಹಾಕಲಿಲ್ಲ. ಒಟ್ಟಿನಲ್ಲಿ ಬೆಳಗಾವಿ ಅಧಿವೇಶನ ಕುರಿತಂತೆ ಮೆಲುಕು ಹಾಕಬಹುದಾದ ಒಳ್ಳೆಯ ನೆನಪುಗಳೇನೂ ದೊರೆಯುವುದಿಲ್ಲ. ಇಲ್ಲಿ ಸೌಧ ನಿರ್ಮಾಣ ಆಗಿ ಒಂದಿಷ್ಟು ರಿಯಲ್ ಎಸ್ಟೇಟ್ ಮಂದಿಗೆ ತುಂಬಾ ಲಾಭ ಆಯಿತು ಎನ್ನುವುದನ್ನು ಬಿಟ್ಟರೆ ಬೆಳಗಾವಿಗೆ ಮತ್ತು ಉತ್ತರ ಕರ್ನಾಟಕದ ಮಂದಿಗೆ ಏನೇನೂ ಪ್ರಯೋಜನ ಆಗಲಿಲ್ಲ.
ಈ ಬಾರಿ ಅಧಿವೇಶನದಲ್ಲಿ ಬಹುಮುಖ್ಯವಾದ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಚರ್ಚೆ ಆಗಬೇಕಿದೆ. ರೈತರಿಗೆ ಕಬ್ಬಿನ ಹಣ ಬಾಕಿ, ಸರಿಯಾದ ಕಬ್ಬಿನ ದರ ನಿಗದಿ ಕುರಿತು ಈ ಭಾಗದಲ್ಲಿ ಹೋರಾಟ ನಡೆಯುತ್ತಲೇ ಇರುತ್ತದೆ. ಅದಕ್ಕೆ ಪರಿಹಾರ ಸಿಗಬೇಕು. ಅದಕ್ಕಿಂತ ಮುಖ್ಯವಾಗಿ ಮೂರು-ನಾಲ್ಕು ವರ್ಷಗಳಿಂದ ಸತತ ಮಳೆಯಿಂದ ಕುಸಿದ ಮನೆಗಳಿಗೆ ಪರಿಹಾರ ದೊರಕಿಯೇ ಇಲ್ಲ. ಇನ್ನೂ ಎಷ್ಟೋ ಕುಟುಂಬಗಳು ಸಮುದಾಯ ಭವನಗಳಲ್ಲಿಯೇ ಬೀಡು ಬಿಟ್ಟಿವೆ. ಕೆಲವರು ಈ ಫಜೀತಿಯೇ ಬೇಡ ಎಂದು ಊರು ಬಿಟ್ಟು ಬೇರೆ ಊರು ಸೇರಿಕೊಂಡಿದ್ದಾರೆ. ಅದಕ್ಕೆ ಆಸ್ಪದ ಇಲ್ಲದವರ ಪಾಡಂತೂ ಯಾರೂ ಕೇಳುವವರೇ ಇಲ್ಲ. ಇದಲ್ಲದೇ ಈ ಭಾಗದ ಹಳೆಯ ಶಾಲೆಗಳ ದುಃಸ್ಥಿತಿ ಗಮನಿಸಬೇಕಿದೆ. ಇವೆಲ್ಲ ಮಾಮೂಲಾಗಿ ಸರ್ಕಾರದ ದೈನಂದಿನ ಚಟುವಟಿಕೆಗಳ ಮೂಲಕವೇ ಬಗೆಹರಿಯಬೇಕಾದ ಸಮಸ್ಯೆಗಳು. ಆದರೆ, ನಮ್ಮ ಅಧಿಕಾರಿಗಳಿಗೆ ಕಮಿಷನ್ ದೊರಕದೇ ಕೆಲಸ ಮಾಡಲು ಮನಸ್ಸಾಗುವುದಿಲ್ಲ. ಜೊತೆಗೆ ಸರ್ಕಾರ ಪರಿಹಾರಕ್ಕೆ ತಕ್ಕ ಅನುದಾನ ನೀಡಿಲ್ಲ ಎಂಬ ಕುಂಟು ನೆಪ ಬೇರೆ. ಸಹಜವಾಗಿಯೇ ಈ ಎಲ್ಲ ವಿಷಯಗಳೂ ಈ ಬಾರಿ ಅಧಿವೇಶನದಲ್ಲಿ ಚರ್ಚೆಗೆ ಬರುತ್ತವೆ. ಆದರೆ ಪರಿಹಾರ ದೊರೆಯುತ್ತದೆ ಎಂಬ ಭರವಸೆ ಏನೇನೂ ಇಲ್ಲ.
ಕಳೆದ ಬಾರಿ ಬೆಂಗಳೂರಲ್ಲಿ ನಡೆದ ಅಧಿವೇಶನದ ವೇಳೆ ಎರಡು ಮುಖ್ಯ ಸಂಗತಿಗಳು ಚರ್ಚೆಗೆ ಬಂದವು. ಒಂದು ಕಮಿಷನ್ ವಿಚಾರ, ಮತ್ತೊಂದು ಪೊಲೀಸು ಇಲಾಖೆಯಲ್ಲಿ ನೇಮಕಾತಿ ವಿಚಾರದಲ್ಲಿ ನಡೆದ ಅಕ್ರಮ. ಈ ಕುರಿತು ದಿನಗಟ್ಟಲೇ ಚರ್ಚೆ ನಡೆಯಿತು. ಆದರೆ ಈ ವರೆಗೂ ಈ ಎರಡೂ ವಿಷಯಗಳ ಕುರಿತು ಸರ್ಕಾರದ ಸ್ಪಷ್ಟವಾದ ನಿಲುವು ಏನೆಂಬುದೇ ತಿಳಿದಿಲ್ಲ. ಸರ್ಕಾರ ಎಲ್ಲ ತಪ್ಪನ್ನೂ ವಿರೋಧ ಪಕ್ಷಗಳ ಮೇಲೆ ಹೊರಿಸುತ್ತದೆ, ಇವರು ಅವರ ಮೇಲೆ ಆಪಾದನೆ ಮಾಡುತ್ತಾರೆ. ಒಟ್ಟಿನಲ್ಲಿ ಆಗಬೇಕಾದ ಕೆಲಸ ಮಾತ್ರ ಆಗುವುದಿಲ್ಲ.
ದಿನವೊಂದಕ್ಕೆ ಕೋಟಿಗಳ ಲೆಕ್ಕದಲ್ಲಿ ಖರ್ಚಾಗುವ ಅಧಿವೇಶನದಲ್ಲಿ ಪಾಲ್ಗೊಳ್ಳಲು ಉತ್ತರ ಕರ್ನಾಟಕ ಶಾಸಕರು ತೋರುವ ಅಸಡ್ಡೆಯನ್ನು ಸದಾ ಕಂಡಿದ್ದೇವೆ. ಬೆಳಗಾವಿಯಲ್ಲಿ ಅಧಿವೇಶನ ನಡೆದರೂ ಅದರಲ್ಲಿ ಪಾಲ್ಗೊಳ್ಳುವುದನ್ನು ಬಿಟ್ಟು ಅದೆಂಥ ಘನ ಕೆಲಸ ಇವರಿಗಿದೆ ಎನ್ನುವುದು ಜನರಿಗೆ ತಿಳಿಯದಾಗಿದೆ. ಅಲ್ಲದೇ ಅಧಿವೇಶನದಲ್ಲಿ ತೌಡು ಕುಟ್ಟುವುದನ್ನು ಬಿಟ್ಟು ಬೇರೇನೂ ಆಗುವುದಿಲ್ಲ ಎನ್ನುವುದು ಈಗಾಗಲೇ ಜನರಿಗೆ ಮನವರಿಕೆ ಆಗಿದೆ. ಬೇಕಾದರೆ ಕಾದು ನೋಡಿ, ಈ ಅಧಿವೇಶನ ಕೂಡ ಸಾಧ್ಯ ಆಗಿಸುವುದು ಶೂನ್ಯವನ್ನೇ ಹೊರತು ಮತ್ತೇನೂ ಅಲ್ಲ.
-ಎ.ಬಿ.ಧಾರವಾಡಕರ