ಬೆಂಗಳೂರು: ಕೇಂದ್ರ ಸರ್ಕಾರ ಹಿಂದಿ ದಿವಸ ಆಚರಣೆಯ ಹೆಸರಲ್ಲಿ ಹಿಂದಿ ಹೇರುತ್ತಿರುವ ವಿರುದ್ಧ ವಾಟಾಳ ನಾಗರಾಜ ನೇತೃತ್ವದಲ್ಲಿ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿದರು. ಈ ಸಮಯದಲ್ಲಿ ವಾಟಾಳ ನಾಗರಾಜ ಅವರು ಹಿಂದಿ ದಿವಸ ವಿರೋಧಿಸಿ ಅಕ್ಟೋಬರ್ 15 ರಂದು ರಾಜ್ಯಾದ್ಯಂತ ಬೃಹತ್ ಪ್ರತಿಭಟನೆಗೆ ಕರೆಕೊಟ್ಟಿದ್ಧಾರೆ.
ವಾಟಾಳ ನಾಗರಾಜ ಅವರು ಈ ಸಂದರ್ಭದಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ಹಿಂದಿ ದಿವಸ ಆಚರಣೆ ಮಾಡುವುದನ್ನು ನಿಲ್ಲಿಸಬೇಕು. ರಾಜ್ಯಕ್ಕೆ ಕೇಂದ್ರದ ಮಂತ್ರಿ ಯಾರೇ ಬಂದರೂ ಕಾರ್ಯಕ್ರಮ ಕನ್ನಡದಲ್ಲೇ ಆಗಬೇಕು ಎಂದರು.
ಹಿಂದಿ ದಿವಸ ವಿರೋಧಿಸಿ ಅಕ್ಟೋಬರ್ 15 ರಂದು ರಾಜ್ಯಾದ್ಯಂತ ಬೃಹತ್ ಪ್ರತಿಭಟನೆಗೆ ಕರೆಕೊಟ್ಟಿದ್ದು ಎಲ್ಲಾ ಕನ್ನಡಪರ ಸಂಘಟನೆಗಳು ಒಟ್ಟಾಗಿ ಪ್ರತಿಭಟನೆ ನಡೆಸಲು ತೀರ್ಮಾನ ಮಾಡಬೇಕು. ಎಲ್ಲಾ ಜಿಲ್ಲಾ ಕೇಂದ್ರ ಕಚೇರಿಗಳ ಆವರಣದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ. ರಾಜ್ಯಾದ್ಯಂತ ಕೇಂದ್ರ ಕಚೇರಿ ಕಟ್ಟಡಗಳ ಮೇಲೆ ಇರುವ ಹಿಂದಿ ಬೋರ್ಡಗಳಿಗೆ ಮಸಿ ಬಳಿಯಲಾಗುವುದು ಎಂದರು.
ಹಿಂದಿ ಬೋರ್ಡ ತೆರವು ಮಾಡಿ ಹಿಂದಿಭೂತ ದಹನ ಮಾಡಲಾಗುವದು. ಕರ್ನಾಟಕದಲ್ಲಿ ಕನ್ನಡ ಚಿತ್ರಗಳು ಮಾತ್ರ ಪ್ರದರ್ಶನ ಆಗಬೇಕು, ಬ್ಯಾಂಕ್ ವ್ಯವಹಾರ ಸಂಪೂರ್ಣವಾಗಿ ಕನ್ನಡದಲ್ಲೇ ಇರಬೇಕು, ಕನ್ನಡ ಶಾಲೆಗಳಿಗೆ ಮೊದಲ ಆದ್ಯತೆ ನೀಡಬೇಕು ಸೇರಿದಂತೆ ಹಲವು ಬೇಡಿಕೆ ಮುಂದಿಟ್ಟು ಪ್ರತಿಭಟನೆ ನಡೆಸಲಾಗುತ್ತದೆ ಎಂದು ವಾಟಾಳ ನಾಗರಾಜ ವಿವರಿಸಿದರು.